ನರಸಿಂಹಸ್ವಾಮಿ, ಎಸ್ -
ಭಾವಚಿತ್ರ ರಚನೆಯಿಂದಲೇ ಪ್ರಖ್ಯಾತರಾದ ಮೈಸೂರಿನ ಕಲಾವಿದರು.

	ತಂದೆ ಸ್ವರ್ಣಕಲಾ ನಿಪುಣರೆಂಬ ಬಿರುದು ಪಡೆದಿದ್ದ ಶಿಲ್ಪಕಲಾ ಪಿತಾಮಹ ಸಿಂಗಣ್ಣಾಚಾರ್ಯ. ಇವರ ತಂದೆ ಮೈಸೂರಿನಲ್ಲಿ ಜನಿಸಿದರು. ನರಸಿಂಹಸ್ವಾಮಿಯವರು ಬಾಲ್ಯದಿಂದಲೂ ಕಲೆಯ ಒಂದು ಮಧುರ ಸನ್ನಿವೇಶದಲ್ಲಿ ಬೆಳೆದು ಬಂದ ಇವರಿಗೆ ಕಲೆಯಲ್ಲಿ ಒಳ್ಳೆಯ ಆಸಕ್ತಿ ಮೂಡಿತು. ತಂದೆ ಕಡೆಯುತ್ತಿದ್ದ ಮೂರ್ತಿಗಳನ್ನು ನೋಡಿ ಒಬ್ಬ ಕಲೆಗಾರರಾಗಬೇಕೆಂಬ ಮಹದಾಸೆ ಅಂಕುರಿಸಿತು. ರೇಖಾಚಿತ್ರಗಳನ್ನು ತಾವೂ ಅಭ್ಯಸಿಸುತ್ತ ಬಂದರು. ಮೈಸೂರಿನ ಪುರಭವನದಲ್ಲಿ ನಗರದ ಪೌರಸಭೆಯವರು ಏರ್ಪಡಿಸಿದ ವಸ್ತುಪ್ರದರ್ಶನದಲ್ಲಿ ಸ್ವಾಮಿಯವರು ತಮ್ಮ ಹದಿನೈದನೆಯ ವಯಸ್ಸಿನಲ್ಲೇ ರಜತ ಪಾರಿತೋಷಕ ಪಡೆದು ಒಪ್ಪೊತ್ತಿನ ವಿದ್ಯಾರ್ಥಿಯಾಗಿ ಚಾಮರಾಜೇಂದ್ರ ಕಲಾಶಾಲೆಯಲ್ಲಿ ಕೇಶವಯ್ಯನವರಂಥ ಪ್ರಸಿದ್ಧ ಕಲಾವಿದರ ಕೈಕೆಳಗೆ ವ್ಯಾಸಂಗ ಮಾಡತೊಡಗಿದರು.

	ತಮ್ಮ ಮಗ ಒಬ್ಬ ಪದವೀಧರನನ್ನಾಗಿ ಮಾಡಬೇಕೆಂದು ಸಿಂಗಣ್ಣಾಚಾರ್ಯರಿಗೆ ಮೊದಲಿನಿಂದಲೂ ಆಸಕ್ತಿ ಇತ್ತು. ಆದರೆ ಸ್ವಾಮಿಯವರ ಅತೀವವಾದ ಕಲಾಭಿರುಚಿ ವಿದ್ಯಾಭ್ಯಾಸಕ್ಕೆ ಅಡ್ಡಿಯನ್ನು ತಂದೊಡ್ಡಿತು. ಮೈಸೂರಿನ ಮಿಷನ್ ಹೈಸ್ಕೂಲಿನಲ್ಲಿ ಮೆಟ್ರಿಕ್ ಪರೀಕ್ಷೆಯವರೆಗೂ ಓದಿ, ವ್ಯಾಸಂಗವನ್ನು ಕೈಬಿಟ್ಟರು. ಅನಂತರ ಮದರಾಸಿನ ಕಲಾಪರೀಕ್ಷೆಗಳಿಗೆ ಖಾಸಗಿಯಾಗಿ ಕೂಡುತ್ತ ಬಂದರು. ಈ ಮಧ್ಯೆ ತಂದೆಯವರ ಜೊತೆಯಲ್ಲಿ ಅರಮನೆಗೆ ಹೋಗಿಬರುವ ಒಂದು ಸುಯೋಗವೂ ಆ ಮೂಲಕ ಆಗಿನ ಪ್ರಭುಗಳಾಗಿದ್ದ ನಾಲ್ವಡಿ ಕೃಷ್ಣರಾಜ ಒಡೆಯರ ದೃಷ್ಟಿಗೆ ಬೀಳುವ ಸೌಭಾಗ್ಯವೂ ಇವರ ಪಾಲಿಗೆ ದೊರಕಿತು. ಮಹಾರಾಜರ ಪ್ರೋತ್ಸಾಹದಿಂದಾಗಿ ಸ್ವಾಮಿಯವರು ಮುಂಬಯಿನ ಜೆ.ಜೆ. ಸ್ಕೂಲ್ ಆಫ್ ಆಟ್ರ್ಸ್ ಶಾಲೆಯಲ್ಲಿ ತಮ್ಮ ಕಲಾ ವ್ಯಾಸಂಗವನ್ನು ಪ್ರಾರಂಭಿಸಿದರು (1930). ಅಲ್ಲಿ ಅನೇಕ ಹಿರಿಯ ಕಲಾವಿದರ ಸಹವಾಸ, ಸಂಪರ್ಕ ದೊರೆತಾಗಿ ಭಾವಚಿತ್ರ ರಚನೆಯಲ್ಲಿ ಸ್ವಾಮಿಯವರ ಕೈ ಚೆನ್ನಾಗಿ ಪಳಗಿತು.

	ಇವರ ಇಜ್ಜಲಿನಿಂದ ಬಿಡಿಸಿದ ಮಹಾರಾಷ್ಟ್ರ ವನಿತೆಯೊಬ್ಬಳ 'ಮೈ ಮಾಡೆಲ್ ಎಂಬ ಭಾವಚಿತ್ರಕ್ಕೆ ಸಿಮ್ಲಾ ಕಲಾಪ್ರದರ್ಶನದಲ್ಲಿ ಸುವರ್ಣಪದಕ ಬಂತು. ಮೈಸೂರಿನ ದಸರಾ ಕಲಾಪ್ರದರ್ಶನದಲ್ಲೂ ಅದಕ್ಕೆ ಎಸ್. ಜಿ. ಶಾಸ್ತ್ರಿಗಳವರ ಬಹುಮಾನವೂ ದೊರೆಯಿತು.

	ಮುಂಬಯಿನ ಚೋರ್ ಬಜಾರಿಗೆ ನಿತ್ಯವೂ ಹೋಗಿಬರುತ್ತ ಸ್ವಾಮಿಗಳು ಅನೇಕ ಶೀಘ್ರ ರೇಖಾಚಿತ್ರಗಳನ್ನು ಬರೆದರು. ಮದರಾಸಿನ ಕಲಾ ಪ್ರದರ್ಶನದಲ್ಲಿ ಇಂಥ ಇವರ ಕೃತಿಗೆ ಬಹುಮಾನ ಬಂತು. ಕಲಾವಿದ ಸರ್‍ದೇಸಾಯಿಯವರು ಶ್ರೀಯುತರನ್ನು ಮನೆಯಲ್ಲೇ ಇಟ್ಟುಕೊಂಡು ಪ್ರೀತಿವಿಶ್ವಾಸವನ್ನು ತೋರಿಸಿ ಪ್ರೋತ್ಸಾಹಿಸಿದರು.

	ಮುಂಬಯಿಯಲ್ಲಿ ಭಾವಚಿತ್ರ ರಚನಾ ಸಾಮಥ್ರ್ಯದಲ್ಲಿ ಕೀರ್ತಿಶಿಖರವನ್ನೇರಿದ್ದ ಅಗಾಸ್ಕರ್ ಎಂಬ ಕಲಾವಿದರಿಂದ ಸ್ವಾಮಿಯವರು ರೇಖಾವಿನ್ಯಾಸಕ್ಕೆ ಅದೆಷ್ಟು ಮಹತ್ತ್ವವಿದೆಯೆಂಬುದನ್ನೂ ಅರಿತರು.

	ಮುಂಬಯಿಯಲ್ಲಿ ವ್ಯಾಸಂಗವನ್ನು ಮುಗಿಸಿ ಮರಳಿದ ಅನಂತರ ಸ್ವಾಮಿಯವರು 1934ರಲ್ಲಿ ವಿಶ್ವಕವಿ ರವೀಂದ್ರರ ಭಾವಚಿತ್ರವನ್ನು ಛಾಯಾಚಿತ್ರ ಒಂದರ ಆಧಾರದಿಂದ ರಚಿಸಿ, ರವೀಂದ್ರರಿಂದಲೇ ಪ್ರಶಂಸೆ ಪಡೆದರು. ಅಲ್ಲಿಂದೀಚೆಗೆ ಸ್ವಾಮಿಯವರು ಸಾಮ್ರಾಟ ಸಾಮ್ರಾಜ್ಞಿಯವರನ್ನು, ರಾಜಕೀಯ ಧುರೀಣರನ್ನೂ, ತತ್ತ್ವಜ್ಞಾನಿಗಳನ್ನು, ಕವಿಕುಲತಿಲಕರನ್ನು, ನಾಟಕಲೇಖಕರನ್ನು, ಮಹಾವಿಜ್ಞಾನಿಗಳನ್ನು, ಸುಪ್ರಸಿದ್ಧ ನಟನಟಿಯರನ್ನು ಭಾವಚಿತ್ರಗಳ ವಸ್ತುವಾಗಿ ಬಳಸಿಕೊಂಡು ಚಿತ್ರರಚನೆಯಲ್ಲಿ ಯಶಸ್ಸನ್ನು ಪಡೆದರು. ಸ್ವಾಮಿಯವರು ರಚಿಸಿದ ಪ್ರಸಿದ್ಧ ಭಾವಚಿತ್ರಗಳಲ್ಲಿ ಹಿಟ್ಲರ್, ಚೇಂಬರ್ಲಿನ್, ಮುಸಲೋನಿ, ಅಂತೊನಿ ಈಡನ್, ಚರ್ಚಿಲ್, ಲೆನಿನ್, ಷಾó, ಸರ್ ಆಲಿವರ್ ಲಾಡ್ಜ್, ಬಟ್ರ್ರಾಂಡ್ ರಸೆಲ್, ಹ್ಯಾವ್‍ಲಾಕ್ ಎಲ್ಲಿಸ್, ರೋಮಾನ್ ರೋಲಾ ಮುಂತಾದವರ ಚಿತ್ರಗಳು ಮುಖ್ಯವಾದವುಗಳು.

	1941ರಲ್ಲಿ ಸ್ವಾಮಿಯವರು ವಾರ್ಧಾಕ್ಕೆ ಹೋಗಿ ಬಾಪೂಜಿಯವರ ದರ್ಶನ ಪಡೆದು ಅವರ ಭಾವಚಿತ್ರವನ್ನು ವರ್ಣಗಳಲ್ಲಿ ಬಿಡಿಸಿದರು. ಅದನ್ನು ಮೆಚ್ಚಿಕೊಂಡ ಬಾಪೂಜಿಯವರು ಆ ಕಲಾಕೃತಿಯ ಮೇಲೆ ಗುಜರಾತಿನಲ್ಲಿ ನಿಜವಾದ ಕಲೆ ಅಮರವಾದುದು ಎಂದು ಬರೆದುಕೊಟ್ಟರು. ಒಮ್ಮೆ ಮೈಸೂರಿಗೆ ಸಂದರ್ಶನ ನೀಡಿದ ಮೌಂಟ್ ಬ್ಯಾಟನ್ ಅವರು ಸ್ವಾಮಿಗಳನ್ನು ದೆಹಲಿಗೆ ಕರೆಸಿಕೊಂಡು ತಮ್ಮ ಭಾವಚಿತ್ರವನ್ನು ಬಿಡಿಸಲು ಅವಕಾಶ ಇತ್ತರು. ಗಾಂಧೀಜಿಯವರ ಚಿತ್ರವನ್ನಂತೂ ಪ್ರಧಾನಿ ನೆಹರೂ ಕೊಂಡು ತಮ್ಮ ಅತಿಥಿಗೃಹದಲ್ಲಿ ಇರಿಸಿಕೊಂಡಿದ್ದರು. ಅದು ಈಗ ತೀನ್‍ಮೂರ್ತಿ ಭವನದ ನೆಹರು ವಸ್ತು ಸಂಗ್ರಹಾಲಯದಲ್ಲಿದೆ.

	ಕಸ್ತೂರಬಾ, ನೆಹರು, ರಾಜೇಂದ್ರ ಬಾಬು, ರಾಜೇಂದ್ರ ಪ್ರಸಾದ್, ರಾಜಗೋಪಾಲಾಚಾರಿ, ವಿಶ್ವೇಶ್ವರಯ್ಯ, ರಾಧಾಕೃಷ್ಣನ್, ಮಿರ್ಜಾ ಮೊದಲಾದವರ ಭಾವಚಿತ್ರಗಳನ್ನೂ ಸ್ವಾಮಿ ಬಿಡಿಸಿದ್ದಾರೆ.

	ನೃತ್ಯಕಲೆಯಲ್ಲಿ ಅಭಿರುಚಿಯಿದ್ದ ಸ್ವಾಮಿಯವರು ನಾಟ್ಯಸರಸ್ವತಿ ಜಟ್ಟಿ ತಾಯಮ್ಮನವರ ಶಿಷ್ಯರಾಗಿ ನೃತ್ಯಾಭ್ಯಾಸಕ್ಕೆ ತೊಡಗಿದರು (1940). ಆ ಕಲೆಯಲ್ಲೂ ಖ್ಯಾತಿಪಡೆದರು.

	ಸ್ವಾಮಿಯವರು ತಮ್ಮ ಚಿತ್ರಗಳಲ್ಲಿ ಚಿತ್ರಿಸಿರುವುದು ಸಾಮಾನ್ಯವಾಗಿ ಅಂತರರಾಷ್ಟ್ರೀಯ ಗೌರವವನ್ನು ಪಡೆದ ವ್ಯಕ್ತಿಗಳನ್ನೇ. ವಿಶ್ವದ ಅನೇಕ ಕಡೆಗಳಲ್ಲಿ ಇವರ ಕೃತಿಗಳು ಶೋಭಿಸುತ್ತಿವೆ. ಸುಪ್ರಸಿದ್ಧ ಆಂಗ್ಲ ಸಾಹಿತಿ ಬರ್ನಾಡ್ ಷಾರವರ ಭಾವಚಿತ್ರ ಈಗ ಲಂಡನ್ನಿನ ಇಂಡಿಯನ್ ಎಂಬಸಿ ಎಂಬಲ್ಲಿ ರಂಜಿಸುತ್ತಿದೆ. ಗಾಂಧೀಜಿ ರಾಟೆ ನೂಲುತ್ತಿರುವಂತಿರುವ ಇವರ ಮತ್ತೊಂದು ಚಿತ್ರ  ಪ್ಯಾರಿಸ್‍ನ ಯುನೆಸ್ಕೊ ಭವನದಲ್ಲಿದೆ. ಹಾಗೆಯೇ ಪ್ರಸಿದ್ಧ ವಿಜ್ಞಾನಿ ಐನ್‍ಸ್ಟೀನರ ಭಾವಚಿತ್ರ ಅಮೆರಿಕದಲ್ಲಿದೆ. ರೂಸ್‍ವೆಲ್ಟ್‍ರ ಚಿತ್ರ ಶ್ವೇತಭವನದಲ್ಲಿದೆ. ಭಾರತದ ಪ್ರಥಮ ದಂಡನಾಯಕ ಜನರಲ್ ಕಾರಿಯಪ್ಪನವರ ತೈಲ ಭಾವಚಿತ್ರ ಮಡಿಕೇರಿಯ ಕಾಲೇಜಿನಲ್ಲಿ ಬೆಳಗುತ್ತಿದೆ. ಮೈಸೂರು ನಗರದ ನಾನಾ ಸಂಘ ಸಂಸ್ಥೆಗಳ ಭವನಗಳಲ್ಲಿ ಇವರು ಬರೆದ ಅನೇಕ ತೈಲಚಿತ್ರಗಳು ನೋಡಸಿಗುತ್ತವೆ. ಇವರ ಇತ್ತೀಚಿನ ಕೃತಿ ಎಂದರೆ ಕನ್ನಡ ಕುಲಪಿತಾಮಹ ಆಲೂರ ವೆಂಕಟರಾಯರ ಹಾಗೂ ಇಂದಿರಾ ಗಾಂಧಿಯವರ ರೇಖಾಚಿತ್ರಗಳನ್ನು ಇವರು ರಚಿಸಿದರು.

ಭಾರತ ಸರ್ಕಾರ ಇವರಿಗೆ ಪದ್ಮಶ್ರೀ ಬಿರುದು ಕೊಟ್ಟು ಗೌರವಿಸಿದೆ.			
	    (ಪಿ.ಆರ್.ಟಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ